+91 9449710675 principal.ppvp@gmail.com Nitya Pravachana CMS Login Student Login PPVP Temple PPSM VVSRI PPST Student Corner Our Blog
Img1 Img2

पूर्णप्रज्ञविद्यापीठसंस्कृतमहापाठशाला

कर्नाटक-संस्कृत-विश्वविद्यालयात् मान्यता प्राप्ता

जगद्गुरु श्रीमन्मध्वाचार्य मूलमहासंस्थानम्

श्री पेजावर अदोक्षज मठ:, उडुपि

Img3 Img4
About Us

ಅಧ್ಯಾತ್ಮ ಜ್ಞಾನದ ಆಶಾಜ್ಯೋತಿ - ಪೂರ್ಣಪ್ರಜ್ಞವಿದ್ಯಾಪೀಠ

About 1

ನಮ್ಮ ದೇಶದ ಅದ್ವಿತೀಯ ಕೊಡುಗೆ ಅಧ್ಯಾತ್ಮ ಸಂಪತ್ತು. ಸಾವಿರಾರುವರ್ಷಗಳ ಹಿಂದೆಯೇ ಇಷ್ಟು ಪ್ರಬುದ್ಧವಾದ ಅಧ್ಯಾತ್ಮಸಾಹಿತ್ಯ, ಇತಿಹಾಸ ಪುರಾಣಗಳು ಪ್ರಪಂಚದ ಇನ್ಯಾವುದೇ ದೇಶಗಳಲ್ಲಿ ವಿಜೃಂಭಿಸಿರಲಿಲ್ಲ, ಈ ತತ್ವಜ್ಞಾನವು ಉಪದೇಶಪರಂಪರೆಯಲ್ಲಷ್ಟೇ ಉಳಿಯದೆ ಆ ಮಾರ್ಗದಲ್ಲಿ ನಡೆದು ಸಿದ್ಧಿ ಪಡೆದ ಸಾಧಕರೂ ನಮ್ಮಲ್ಲಿದ್ದರು. ಇಂತಹ ತತ್ವಜ್ಞಾನ ಇಂದು ನಾಶದ ಅಂಚಿನಲ್ಲಿದೆ. ಅದನ್ನು ರಕ್ಷಿಸಿ ಬೆಳೆಸುವುದು ವಿಶೇಷವಾಗಿ ಪ್ರತಿಯೊಬ್ಬ ಪೀಠಾಧಿಪತಿಗಳ ಕರ್ತವ್ಯ. ಎಳವೆಯಲ್ಲಿಯೇ ಈ ಮುಂದಾಲೋಚನೆಯನ್ನು ಮಾಡಿ ಅದಕ್ಕಾಗಿ ಕಾರ್ಯಪ್ರವೃತ್ತರಾದವರು ಶ್ರೀ ವಿಶ್ವೇಶತೀರ್ಥಶ್ರೀಪಾದರು. ಅವರು ನಡೆಸಿದ ಮೊದಲ ಸಾಧನೆ ಪೂರ್ಣಪ್ರಜ್ಞವಿದ್ಯಾಪೀಠದ ಸ್ಥಾಪನೆ. ಕ್ರಿ.ಶ. 1956ರಲ್ಲಿ 12 ವಿದ್ಯಾರ್ಥಿಗಳು ಮೂರು ಅಧ್ಯಾಪಕರಿಂದ ಆರಂಭಗೊಂಡ ಈ ಗುರುಕುಲ ಇಂದು ಮೂರು ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಉಚಿತ ಊಟವಸತಿಗಳನ್ನಿತ್ತು ವಿದ್ಯಾದಾನ ಮಾಡುವ ಅಪೂರ್ವಸಂಸ್ಥೆಯಾಗಿದೆ.

About 2

1953ರಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರು 'ಅಖಿಲಭಾರತ ಮಾಧ್ವಮಹಾಮಂಡಲ'ವನ್ನು ಸ್ಥಾಪಿಸಿದರು. ಆಗ ವಿದ್ಯಾಪೀಠದ ಸ್ಥಾಪನೆಯ ಆವಶ್ಯಕತೆಯ ಬಗ್ಗೆ ಹೀಗೆ ಹೇಳಲಾಗಿತ್ತು – “ಇಂದಿನ ಯಾಂತ್ರಿಕ ಯುಗದಲ್ಲಿ ಜನರಿಗೆ ದೇವರ ಮೇಲೆ ಶ್ರದ್ಧೆ ಕುಸಿಯುತ್ತಿದೆ. ವಿದೇಶೀಯರ ಸಂಸ್ಕೃತಿಯ ಪ್ರಭಾವದಿಂದ ವೈದಿಕಸಂಸ್ಕೃತಿಯಲ್ಲಿ ಜನರಿಗೆ ಜುಗುಪ್ಪೆ ಹುಟ್ಟುತ್ತಿದೆ. ಆಂಗ್ಲವಿದ್ಯೆ ಸಂಸ್ಕೃತ ವಿದ್ಯಾಭ್ಯಾಸದ ಅಭಿರುಚಿಯನ್ನು ಕಡಿಮೆ ಮಾಡುತ್ತಿದೆ. ಹಳೆ ತಲೆಮಾರಿನ ವಿದ್ವಾಂಸರು ಕಣ್ಣು ಮುಚ್ಚುತಿದ್ದಾರೆ. ಹೊಸದಾಗಿ ವಿದ್ಯಾಭ್ಯಾಸಕ್ಕೆ ಅವಕಾಶಗಳೂ ಕಡಿಮೆಯಾಗುತ್ತಿವೆ. ಹೀಗಾಗಿ ಇನ್ನು ಹತ್ತಿಪ್ಪತ್ತು ವರ್ಷಗಳಲ್ಲಿ ವಿದ್ವಾಂಸರ ಸಂಖ್ಯೆ ಮಹಾಸಮುದ್ರದ ಒಂದು ಬಿಂದುವಿನಷ್ಟೇ ಉಳಿಯುತ್ತದೆ''.

About 3

'ನಮ್ಮ ಪ್ರಾಚೀನ ತತ್ವಜ್ಞಾನ, ಶಾಸ್ತ್ರಪರಂಪರೆ ಉಳಿಸುವುದಕ್ಕಾಗಿ ಆ ಶಾಸ್ತ್ರಗಳನ್ನು ಅಖಂಡವಾಗಿ ಅಭ್ಯಸಿಸಿ ವಿಶೇಷಪಾಂಡಿತ್ಯವನ್ನು ಪಡೆದ ಯಾವುದೇ ಭಾಗವನ್ನು ಚೆನ್ನಾಗಿ ಅಭ್ಯಾಸಪೂರ್ಣವಾಗಿ ಪ್ರವಚನಮಾಡಬಲ್ಲ, ತತ್ವಜ್ಞಾನವನ್ನು ಪಾಶ್ಚಾತ್ಯ ವಿಚಾರಗಳ ಜೊತೆಗೆ ತುಲನಾತ್ಮಕದೃಷ್ಟಿಯಿಂದ ವಿವೇಚಿಸಿ ಅದರ ವೈಶಿಷ್ಟ್ಯವನ್ನು ಪ್ರತಿ ಪಾದಿಸಬಲ್ಲ ಉತ್ತಮ ಪಂಡಿತರನ್ನು ತಯಾರಿಸಿ ಸಮಾಜದ ದೊಡ್ಡ ಕೊರತೆಯನ್ನು ನೀಗುವುದೇ ಈ ವಿದ್ಯಾಪೀಠದ ಉದ್ದೇಶವಾಗಿದೆ' (ಈ ವಿಷಯವು 'ಅಖಿಲಭಾರತ ಮಾಧ್ವಮಹಾಮಂಡಲದ ತತ್ವವಾದ ಎಂಬ ಪತ್ರಿಕೆಯ 1956ನೆ ವರ್ಷದ ಮೇ ತಿಂಗಳ ಸಂಚಿಕೆಯಲ್ಲಿ ಪ್ರಕಟವಾಗಿದೆ). ಈ ಉದ್ದೇಶದಿಂದ ಮಂಡಲ 29-5-1955ರಲ್ಲಿ ಶ್ರೀ ವಿದ್ಯಾಮಾನ್ಯತೀರ್ಥರು ಮತ್ತು ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಒಂದು ಉಪಸಮಿತಿಯನ್ನು ನೇಮಿಸಿ ವಿದ್ಯಾಪೀಠ ನಡೆಸಲು ಕೆಲವು ಪ್ರದೇಶಗಳನ್ನು ಸೂಚಿಸಿತು. 1. ಉಡುಪಿಯ ಪಾಜಕಕ್ಷೇತ್ರ, 2. ಬೆಂಗಳೂರು, 3. ರಾಯಚೂರಿನ ಬಳಿಯ ಗದ್ವಾಲ, 4.ಬನಾರಸ್, 5. ಮಳಖೇಡ, 6. ಮಂತ್ರಾಲಯ, 7. ತಿರುಪತಿ. ಅಲ್ಲದೇ 25 ಸಹಸ್ರರೂಪಾಯಿ ನಿಧಿಯನ್ನು ಅದಕ್ಕಾಗಿ ಮೀಸಲಾಗಿಟ್ಟಿತು. ಅದೇ ವರ್ಷದ ವಿಜಯದಶಮಿಯಂದು ವಿದ್ಯಾಪೀಠವನ್ನು ಪ್ರಾರಂಭಿಸಬೇಕೆಂದು ಸಮಿತಿಯ ಉದ್ದೇಶವಾಗಿತ್ತು.

About 4

ಸಮಿತಿ ಕರ್ನಾಟಕ ರಾಜಧಾನಿ ಬೆಂಗಳೂರು ನಗರವನ್ನು ವಿದ್ಯಾಪೀಠಕ್ಕಾಗಿ ಆರಿಸಿತು. 27-7-1956ರಂದು ಬೆಂಗಳೂರಿನ ಚಾಮರಾಜಪೇಟೆಯ ಮಾಧ್ವ ಸಂಘದಲ್ಲಿ ಸೇರಿ ನರಸಿಂಹರಾಜಾ ಕಾಲೋನಿಯಲ್ಲಿರುವ ಕಲ್ಯಾಣಿ ರಾಘವೇಂದ್ರ ಮಠದಲ್ಲಿ ಗುರುಕುಲವನ್ನು ಆರಂಭಿಸಲು ನಿರ್ಧರಿಸಿತು. ಮಠದ ಅಧಿಕಾರಿಗಳಾಗಿದ್ದ ಶ್ರೀ ಆನಂದತೀರ್ಥಾಚಾರ್ಯರು ಐದು ವರ್ಷಗಳ ಅವಧಿಗೆ ಉಚಿತವಾಗಿ ಸ್ಥಳಾವಕಾಶ ನೀಡಲು ಸಮ್ಮತಿಸಿದರು. ಅದರಂತೆ ಮಾಧ್ವ ಸಂಪ್ರದಾಯದ ಪ್ರಸಿದ್ಧ ವ್ಯಾಖ್ಯಾನಕಾರರಾದ ಟೀಕಾಚಾರ್ಯರೆಂದೇ ಖ್ಯಾತರಾದ ಶ್ರೀಜಯತೀರ್ಥರ ಆರಾಧನಾ ದಿನದಂದು (28-7-1956) ಶ್ರೀವಿದ್ಯಾಮಾನ್ಯತೀರ್ಥರಿಂದ ವಿದ್ಯಾಪೀಠ ಪ್ರಾರಂಭವಾಯಿತು. ಮುಂದಿನ ಒಂದೇ ವರ್ಷದಲ್ಲಿ ಸಮೀಪದಲ್ಲೇ ಮೂರು ಎಕರೆಯ ವಿಸ್ತೀರ್ಣ ಪ್ರದೇಶವನ್ನು ಪಡೆದು ಅಲ್ಲಿ ವಿದ್ಯಾರ್ಥಿನಿಲಯ ಹಾಗೂ ಸಭಾಭವನ, ಕಾರ್ಯಾಲಯ, ಗ್ರಂಥಾಲಯಗಳಿಗೆ ಬೇಕಾಗುವ ಎರಡು ಕಟ್ಟಡಗಳಿಗೆ ಶ್ರೀವ್ಯಾಸರಾಜ ಮಠಾಧೀಶರಾದ ಶ್ರೀವಿದ್ಯಾಪ್ರಸನ್ನತೀರ್ಥರಿಂದ ಶಂಕುಸ್ಥಾಪನೆಯೂ ನೆರವೇರಿತು. 1969ರವರೆಗೆ ಮಂಡಲದ ಅಧೀನಸಂಸ್ಥೆಯಾಗಿದ್ದ ವಿದ್ಯಾಪೀಠ 1971ರಲ್ಲಿ ಒಂದು ತಾತ್ಕಾಲಿಕಕಾರ್ಯನಿರ್ವಾಹಕ ಸಮಿತಿಯ ಆಡಳಿತಕ್ಕೆ ಒಳಪಟ್ಟಿತು. 1968ರವರೆಗೆ ವಿದ್ಯಾಪೀಠದ ಉಪಕುಲಪತಿಗಳಾಗಿ ಪ್ರೊ|| ರಾವ್ ಬಹದ್ದೂರ್ ವೇಂಕಟೇಶಾಚಾರ್ಯರು ಸಮರ್ಥವಾಗಿ ವಿದ್ಯಾಪೀಠವನ್ನು ನಡೆಸಿದರು. ಅನಂತರ ಆ ಸ್ಥಾನವನ್ನು ಪ್ರೊ|| ಕೆ.ಟಿ.ಪಾಂಡುರಂಗಿಯವರು ಅಲಂಕರಿಸಿದರು. ಶ್ರೀವಿಶ್ವೇಶತೀರ್ಥ ಶ್ರೀಪಾದರು ಕುಲಪತಿಗಳಾಗಿ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಅಂದಿನಿಂದಲೂ 2019ರಲ್ಲಿ ವೃಂದಾವನಪ್ರವೇಶ ಮಾಡುವವರೆಗೂ ಶ್ರಮಿಸಿದರು. ಅವರ ನಂತರ ಅವರ ಶಿಷ್ಯರಾದ ಶ್ರೀವಿಶ್ವಪ್ರಸನ್ನತೀರ್ಥರು ನೇತೃತ್ವವನ್ನು ವಹಿಸಿದ್ದಾರೆ.

About 5

1967ರಿಂದ ಕರ್ನಾಟಕ ಸರಕಾರವೂ ಸಂಸ್ಕೃತ ಮಹಾಪಾಠಶಾಲೆ ಎಂದು ಪರಿಗಣಿಸಿ ಸಂಸ್ಥೆಗೆ ಅನುದಾನವನ್ನೂ ನೀಡುತ್ತಿದೆ. 1981ರ ಸಂಸ್ಥೆಯ ರಜತಮಹೋತ್ಸವ ಸಂದರ್ಭದಲ್ಲಿ 15 ವಿದ್ಯಾರ್ಥಿಗಳಿಂದ ಆರಂಭವಾಗಿದ್ದ ಸಂಸ್ಥೆ 165 ವಿದ್ಯಾರ್ಥಿಗಳಿಗೆ ಆಶ್ರಯ ತಾಣವಾಗಿತ್ತು 2006ರಲ್ಲಿ 460 ವಿದ್ಯಾರ್ಥಿಗಳು ಇದ್ದರು, ಸಂಸ್ಥೆಯಲ್ಲೇ ಸಿದ್ಧರಾದ 40 ಅಧ್ಯಾಪಕರೂ ಇದ್ದರು. ಇತ್ತೀಚಿಗೆ ಪೂರ್ಣಪ್ರಜ್ಞವಿದ್ಯಾಪೀಠ ಪ್ರತಿಷ್ಠಾನ(ರಿ.) ಎಂಬ ಸಮಿತಿ ವಿದ್ಯಾಪೀಠದ ಉಸ್ತುವಾರಿ ನೋಡಿಕೊಳ್ಳುತ್ತಿದೆ. 2025ರಲ್ಲಿ ಸುಮಾರು 300 ಜನ ವಿದ್ಯಾರ್ಥಿಗಳು ಇದ್ದಾರೆ.